ಪ್ರೀತಿಯ ಅಮ್ಮ,
ಬೇಡುವ ಆಶೀರ್ವಾದಗಳು. ಹೇಗಿದ್ದೀಯಾ? ಚೆನ್ನಾಗಿದ್ದಿ ತಾನೆ? ಅಪ್ಪ, ಅಣ್ಣ, ಎಲ್ಲರೂ ಕುಶಲವಷ್ಟೇ? ನಾನಂತೂ ತುಂಬಾ ಆರಾಮ.
ಹಾಂ, ಅಮ್ಮ,.. ಮೊನ್ನೆ ನಮಗೆ ಪರೀಕ್ಷೆಯಿತ್ತು. ಪರವಾಗಿಲ್ಲ ಪಾಸಾದೇನು! ಅಂದ ಹಾಗೆ ಅಮ್ಮ, ಇನ್ನೆರಡು ವಾರ ಕಳೆದರೆ ನಮಗೆ ರಜ ಸಿಗುತ್ತದೆ. ಮತ್ತೆ ಮನೆಗೆ ಬಂದು ನಿನ್ನ ಮಡಿಲಲ್ಲಿ ಮಲಗಿ ನಿದ್ರಿಸಬಹುದು...
ಅಮ್ಮ, ಆ ಎಮ್ಮೆ ಈಗ ನೆಟ್ಟಗೆ ಕರೆಯಲು ಬಿಡುತ್ತದೆಯೋ ಇಲ್ಲವೋ? ಮತ್ತೆ ದನ ಕರುಗಳು, ಹಗಲಿರುಳೂ ಸುಮ್ಮನೇ ತಲೆಹರಟೆ ಮಾಡುವ ನಾಯಿ, ಇಲಿಯೊಂದಿಗೆ ಫ್ರೆಂಡ್ ಶಿಪ್ ಮಾಡಿಕೊಂಡಿರುವ ಬೆಕ್ಕು...ಎಲ್ಲವೂ ಏನು ಮಾಡುತ್ತಿವೆ? ಬಂದಾಗ ಎಲ್ಲದರ ಹಣೆಗೂ ಮುತ್ತುಕೊಟ್ಟು ಮುದ್ದಾಡಬೇಕು ನಾನು.
ಸರಿ ಅಮ್ಮ, ಬೇರೇನೂ ವಿಶೇಷವಿಲ್ಲ. ಇಂದಿನಿಂದ ಹದಿನೈದನೇ ದಿನಕ್ಕೆ ಮನೆಯಲ್ಲಿರುತ್ತೇನೆ. ಅಲ್ಲಿಯವರೆಗೆ ನಿನ್ನದೇ ನೆನಪುಗಳು...
ಪ್ರೀತಿಯಿಂದ,
..... ಹೀಗೆಲ್ಲಾ ಪತ್ರ ಬರೆಯುವ ಪರಿಪಾಠ ನಿಂತು ಹೋಗಿ ವರುಷಗಳೇ ಕಳೆದುಹೋಗಿವೆ. ಪತ್ರದ ಜಾಗದಲ್ಲಿ ಮೊಬೈಲ್ ಬಂದು ಅಡ್ಡಡ್ಡ ಮಲಗಿಬಿಟ್ಟಿದೆ. ಆದ್ದರಿಂದಲೇ ಇಂದು ಪತ್ರ ಅಂದ ಕೂಡಲೇ ಮೂಗುಮುರಿಯುವ, ಆ..ಕಳಿಸುವ ಹಂತಕ್ಕೆ ಬಂದುಬಿಟ್ಟಿದ್ದೇವೆ. ನಿಜ, ಮೊಬೈಲ್ ಅಥವಾ ಸ್ಥಿರ ದೂರವಾಣಿಗಳು ನಮ್ಮ ಸಂಪರ್ಕ ಸಾಧ್ಯತೆಯನ್ನು ಇನ್ನಷ್ಟು ಸರಳಗೊಳಿಸಿವೆ. ಶೀಘ್ರ ಸಂವಹನವನ್ನು ಸಾಕಾರಗೊಳಿಸಿವೆ. ಈ ದಿನದ ಅಗತ್ಯಕ್ಕೆ ತಕ್ಕಂತೆ ಸ್ಪಂದಿಸುತ್ತಿವೆ. ಆದರೆ ಸ್ನೇಹಿತರೇ, ಇವೆಲ್ಲದರ ಭರದಲ್ಲಿ ಇದೇ ಮೊಬೈಲ್, ಸ್ಥಿರ ದೂರವಾಣಿಗಳು ನಮ್ಮ ಸಣ್ಣ ಸಣ್ಣ ಸಂವೇದನೆಗಳನ್ನೂ ಹಿಸುಕಿ ಹಾಕುತ್ತಿವೆ ಎಂಬುದನ್ನು ಮರೆಯಬಾರದು!
ನೀವೇ ಗಮನಿಸಿ ನೋಡಿ. ಒಂದು ಪತ್ರ ಬರೆಯುವಾಗ ನಮ್ಮ ನೆನಪು, ಕನಸು, ಕನವರಿಕೆ, ಆಶಯ, ಅಭಿಪ್ರಾಯ, ಕೀಟಲೆ, ತುಂಟತನ, ಪ್ರೀತಿ, ಮಮತೆ, ಕಕ್ಕುಲಾತಿ, ಕಾಳಜಿ... ಹೀಗೆ ಎಲ್ಲವೂ ಸಾಕ್ಷಾತ್ಕಾರಗೊಳ್ಳುತ್ತವೆ. ಸಣ್ಣಪುಟ್ಟ ವಿಷಯಗಳ ಕುರಿತೂ ಗಮನ ಹರಿಸಲು ಪತ್ರದಲ್ಲಿ ಮಾತ್ರ ಸಾಧ್ಯ. ಅದೇ ಮೊಬೈಲ್ ನಲ್ಲಿ ಮಾತನಾಡುವಾಗ ಗಮನವೆಲ್ಲಾ ಕರಗುತ್ತಿರುವ ಕರೆನ್ಸಿ ಕಡೆಗೇ! ಆದ್ದರಿಂದಲೇ ಮೊಬೈಲ್ ಸಂವಹನದಲ್ಲಿ ನಮಗೆ ವ್ಯವಹಾರವನ್ನು ಬಿಟ್ಟು ಬೇರೆ ಮಾತನಾಡುವುದಕ್ಕೇ ಆಗುವುದಿಲ್ಲ. ಮನೆಯ ದನ ಕರುಗಳು, ಬೆಕ್ಕುಗಳೆಲ್ಲಾ ಇಲ್ಲಿ ಬಂದು ಹೋಗುವುದೇ ಇಲ್ಲ!
ಇನ್ನೂ ಒಂದು ಗಮನಾರ್ಹ ಸಂಗತಿಯೆಂದರೆ ಯಾವತ್ತೂ ಮೊಬೈಲ್ ಮಾತುಕತೆ ಪತ್ರದಷ್ಟು ಆಪ್ತವಾಗುವುದೇ ಇಲ್ಲ ಅನ್ನುವುದು. ಯಾಕೆಂದರೆ ಪತ್ರದಲ್ಲಿ ಬರೆಯಲ್ಪಟ್ಟ ಅಷ್ಟೂ ಪದಗಳು ಭಾವನೆಗಳ ಕೊಳದಲ್ಲಿ ಮಿಂದೆದ್ದು ಬಂದಿರುತ್ತವೆ. ಆದ್ದರಿಂದಲೇ ಪತ್ರಗಳು ನೇರವಾಗಿ ಹೃದಯದ ಕಪಾಟಿನೊಳಗೆ ನುಗ್ಗಿ ಕದ ಹಾಕಿಕೊಳ್ಳುತ್ತವೆ ಮತ್ತು ಅಲ್ಲೇ ಭದ್ರವಾಗಿರುತ್ತವೆ. 'ಬೇಡುವ ಆಶೀರ್ವಾದಗಳು', 'ಅಜ್ಜ ಹೇಗಿದ್ದಾರೆ?', 'ಪಕ್ಕದ್ಮನೆ ನಾರಾಯಣ ಏನು ಮಾಡುತ್ತಿದ್ದಾನೆ?', 'ಆ ಗಿರಿಜಳಿಗೆ ಮದುವೆ ಆಯಿತಾ?' 'ಪೇಪರ್ ಅಂಗಡಿ ಮಹೇಶನಿಗೆ ಆರೋಗ್ಯ ಸುಧಾರಿಸಿತಾ?'... ಇಂತಹ ಅದೆಷ್ಟೋ ವಾಕ್ಯಗಳು (ಮಾತುಗಳು) ಪತ್ರದಲ್ಲಿ ಮಾತ್ರ ಮೂಡಿಬರಲು ಸಾಧ್ಯ ಮತ್ತು ಅದನ್ನೇ ನಾನು ಸಂವೇದನೆ ಹಾಗೂ ಸಂಸ್ಕೃತಿ ಅನ್ನುತ್ತಿರುವುದು.
ಪತ್ರದ ಇನ್ನೊಂದು ಬಹುದೊಡ್ಡ ಗುಣವೆಂದರೆ, ಪತ್ರಗಳನ್ನು ವರುಷಗಳ ನಂತರವೂ ಓದಿ ಖುಷಿಪಡಬಹುದು. ಪತ್ರಗಳೆಂದರೆ ನುಡಿಚಿತ್ರಗಳಂತೆ. ಅವು ಸದಾ ನಳನಳಿಸುತ್ತಲೇ ಇರುತ್ತವೆ. ಮಾತ್ರವಲ್ಲ, ಸಂತೋಷವನ್ನು ಮೊಗೆಮೊಗೆದು ನೀಡುತ್ತಲೇ ಇರುತ್ತವೆ. ಸುಮ್ಮನೇ ಒಮ್ಮೆ ಮನೆಯಲ್ಲಿ ತಡಕಾಡಿ. ಯಾವತ್ತೋ ಒಂದು ದಿನ ಯಾರೋ ಬರೆದ ಪತ್ರ ಸಿಕ್ಕರೂ ಸಿಗಬಹುದು. ಆ ಪತ್ರ ಈವತ್ತೂ ಎಷ್ಟು ಸಂಭ್ರಮ ತಂದೀಯುತ್ತದೆ ನೋಡಿ.
ಅದೂ ಅಲ್ಲದೆ ಕೆಲವನ್ನು ಮಾತಿನಲ್ಲಿ ಹೇಳಲಾಗುವುದೇ ಇಲ್ಲ. ಹಾಗೆ ಮಾತು ಮೌನವಾದಾಗ ನೆರವಿಗೆ ಬರುವುದು ಈ ಅಕ್ಷರ ಸರಸ್ವತಿಯೇ! ಮುಖಕ್ಕೆ ಮುಖ ಕೊಟ್ಟು ಹೇಳಲಾಗದ್ದನ್ನೂ ಹೇಳುವ ತಾಕತ್ತಿರುವುದು ಅದು ಅಕ್ಷರಗಳಿಗೆ ಮಾತ್ರ. ಅಂತಹ ಅದ್ಭುತ ಕಲೆಯೇ ಇಂದು ಕಣ್ಮರೆಯಾಗುತ್ತಿದೆ.
ಇಂದು ಯಾರನ್ನೇ ಬೇಕಾದರೂ ಕೇಳಿ ನೋಡಿ. ಬೇಕಾದರೆ ಪದವಿ, ಸ್ನಾತಕೋತ್ತರ ಪದವಿ ಓದಿದವರನ್ನೇ ಗಮನಿಸಿ ನೋಡಿ. ಇವರೆಲ್ಲಾ ಬೇಕಾದರೆ ಉದ್ಯೋಗಕ್ಕೆ ಪುಟಗಟ್ಟಳೆ ಅರ್ಜಿ ಬರೆಯಬಲ್ಲರು. ಆದರೆ ಅಜ್ಜಿಗೊಂದು ಪತ್ರ ಬರೆಯಲಾರರು! ಪತ್ರವನ್ನು ಆರಂಭಿಸುವುದು ಹೇಗಂತಲೇ ಬಹುತೇಕ ಮಂದಿಗೆ ಗೊತ್ತಿಲ್ಲ.
ಅಣ್ಣ ತಂಗಿಗೆ ಬರೆಯುತ್ತಿದ್ದ ಕಿವಿ ಹಿಂಡುವಂತಹ ಪತ್ರ, ಮಗ ಅಪ್ಪನಿಗೆ ಬರೆಯುತ್ತಿದ್ದ ಮಿಶ್ರಭಯಭರಿತ ಪತ್ರ, ಮೊಮ್ಮಗ ಅಜ್ಜನಿಗೆ ಬರೆಯುತ್ತಿದ್ದ ಮುಗ್ಧ ಪತ್ರ, ಅಳಿಯ ಮಾವನಿಗೆ ಬರೆಯುತ್ತಿದ್ದ ಗೌರವ ಸಹಿತ ಪತ್ರ, ಸ್ನೇಹಿತರು ಬರೆದುಕೊಳ್ಳುತ್ತಿದ್ದ ತುಂಟ ಪತ್ರ.... ಹೀಗೆ ಬರೆಯುತ್ತಿದ್ದ ಪಾತ್ರಗಳೆಲ್ಲಾ ಈಗ ಎಲ್ಲೋ ಕಾಣೆಯಾಗಿಹೋಗಿವೆ. ಅಷ್ಟೆಲ್ಲಾ ಯಾಕೆ? ಈಗಿನ ಹುಡುಗ ಹುಡುಗಿಯರು ಪ್ರೇಮ ಪತ್ರವನ್ನೂ ಬರೆಯುವುದಿಲ್ಲ!
ಸ್ನೇಹಿತರೇ, ಸುಮ್ಮನೇ ಬರುವ ಮೊಬೈಲ್ ಸಂದೇಶಗಳನ್ನೇ ಪೆಟ್ಟಿಗೆಯಲ್ಲಿ ಚಿನ್ನ ಇಡುವಂತೆ ಇಟ್ಟುಕೊಂಡು ದಿನಾ ಬೆಳಗ್ಗೆದ್ದು ನೋಡಿ ತುಸು ನಗುವವರು ನಾವು. ಅಂಥಾದ್ದರಲ್ಲಿ ಪತ್ರವೊಂದು ಬಂದರೆ ಅದೆಷ್ಟು ಮುದನೀಡಲಿಕ್ಕಿಲ್ಲ? ಯೋಚಿಸಿ ನೋಡಿ. ಹಾಗೆಯೇ ಯಾರಿಗಾದರೂ ಸುಮ್ಮನೇ ಒಮ್ಮೆ ಪತ್ರ ಬರೆಯುವ ಬಗ್ಗೆಯೂ ಯೋಚನೆ ಮಾಡಿ.
Read more...