ಕಲಾವಿದರ ಕತೆ

>> Wednesday, March 18, 2009

೧) 'ಯಕ್ಷರಾಜ' ಚಿಟ್ಟಾಣಿ ರಾಮಚಂದ್ರ ಹೆಗಡೆ ಬಗ್ಗೆ ಯಾರಿಗೆ ತಾನೇ ಗೊತ್ತಿಲ್ಲ? ವಯಸ್ಸು ಎಪ್ಪತ್ತೈದು ಕಳೆಯುತ್ತಿದ್ದರೂ, ಇಂದಿಗೂ ರಂಗದ ಮೇಲಿನ ಅವರ ಹಾವ ಭಾವ, ಅಭಿನಯ, ಕುಣಿತ.. ಬಿಡಿ, ಅಂಥಾ ಕಲಾವಿದ ಸಿಕ್ಕುವುದು ಶತಮಾನಕ್ಕೊಮ್ಮೆ!
ವಿಷ್ಯ ಅದಲ್ಲ. ಇಂಥಾ ಚಿಟ್ಟಾಣಿಗೆ ತನ್ನ ಇಪ್ಪತ್ತೈದನೇ ವಯಸ್ಸಿನಲ್ಲಿ ಒಂದು ಲವ್ ಇತ್ತಂತೆ!! ಹಾಂ, ಇದು ಗಾಸಿಪ್ ಅಲ್ಲ. ಹಾಗಂತ ಅವರ ಆತ್ಮಕಥನ 'ನಿಮ್ಮ ಚಿಟ್ಟಾಣಿ' ಯಲ್ಲಿದೆ. ಸಾವಿತ್ರಿ ಅನ್ನುವ ಹುಡುಗಿ (ಈಗ ಹುಡುಗಿ ಅಲ್ಲ!!) ಮತ್ತು ಚಿಟ್ಟಾಣಿ ನಡುವೆ 'ಅದು' ಹುಟ್ಟಿಕೊಂಡಿತ್ತಂತೆ.
'ಅವಳು ನನ್ನ ಹಗಲು ವೇಷ ನೋಡಿ ಮೆಚ್ಚಿಕೊಂಡಳೋ ಅಲ್ಲ ರಾತ್ರಿ ವೇಷ ನೋಡಿ ಮೆಚ್ಚಿಕೊಂಡಳೋ ಅಂತ ಗೊತ್ತಿಲ್ಲ!' ಎಂದು ಚಿಟ್ಟಾಣಿ ಹೇಳುತ್ತಾರೆ. ತಮಾಷೆ ಅಂದ್ರೆ ಚಿಟ್ಟಾಣಿ ಆ ಕಾಲದಲ್ಲಿ ತನ್ನ ಪ್ರೇಯಸಿಗೆ ಪ್ರೇಮ ಪತ್ರ ಬರೆದಿದ್ದರಂತೆ!! ಆಕೆಯನ್ನು ಅವರು ಪ್ರೀತಿಯಿಂದ 'ಸವಿ' ಅಂತ ಕರೆಯುತ್ತಿದ್ದರಂತೆ!
ಆದರೆ ಏನು ಮಾಡೋಣ ಹೇಳಿ? ಅಂದಿನ ಕಾಲದಲ್ಲಿ ಮನೆಯವರು ಹೇಳಿದ ಹುಡುಗಿಯನ್ನೇ ಮದುವೆಯಾಗುವುದು ಕಡ್ಡಾಯವಾಗಿತ್ತು. ಆದ್ದರಿಂದಲೇ 'ಮುಂಗಾರು ಮಳೆ' ಸಿನಿಮಾದಂತೆ 'ಪ್ರೀತಿ ಮಧುರ ತ್ಯಾಗ ಅಮರ' ಅಂತ ಪ್ರೀತಿಯನ್ನು ಬಿಟ್ಟುಬಿಡಬೇಕಾಯಿತಂತೆ. ಛೆ!
ಅಂದ ಹಾಗೆ ಇತ್ತೀಚೆಗೆ ಚಿಟ್ಟಾಣಿ ಮೈಸೂರಲ್ಲಿ ಸಿಗಬೇಕಾ? ಅವರನ್ನು ಕೇಳಿದೆ. 'ಅಕಸ್ಮಾತ್ ಈಗ ನಿಮ್ಮ ಮುಂದೆ ಆ ನಿಮ್ಮ 'ಸವಿ' ಬಂದು ಕುಳಿತರೆ ನಿಮ್ಮ ಅಭಿನಯ ಹೇಗಿದ್ದೀತು?' ಅಂತ. ಇಳಿ ವಯಸ್ಕ ಚಿಟ್ಟಾಣಿ ನಾಚುತ್ತಾ ಹೇಳಿದ್ದೇನು ಅಂತೀರಾ? 'ಈಗಲೂ ಅವ್ಳು ಬಂದು ಕೂತರೆ ಅಭಿನಯ ಸ್ವಲ್ಪ ಏರು ಪೇರಾದೀತು. ಗಮನ ಸ್ವಲ್ಪ ಅಲ್ಲಿಗೇ ಹೋದೀತು!!'
ನನ್ನ ಅನುಮಾನ ಅಂದ್ರೆ, ಚಿಟ್ಟಾಣಿಯವರ ಶೃಂಗಾರ ರಸದ ಕುಣಿತದ ಹಿಂದೆ 'ಸವಿ ಸವಿ' ನೆನಪು ಇರಬಹುದಾ ಅಂತ?!




೨) ಅದು ಮಂಗಳೂರಿನ ಟವುನ್ ಹಾಲ್ ನಲ್ಲಿ ನಡೆದ ಯಕ್ಷಗಾನ ತಾಳಮದ್ದಳೆ. ರಾವಣನಾಗಿ ಅರ್ಥ ಹೇಳಲು ಕುಳಿತವರು ಮತ್ತಿನ್ಯಾರು? ಅದ್ಭುತ ಅರ್ಥಧಾರಿ ಶೇಣಿ ಗೋಪಾಲಕೃಷ್ಣ ಭಟ್. ಅವರು ಪೀಠಿಕೆ ಶುರುವಿಟ್ಟರು. ಶೇಣಿ ಅರ್ಥ ವೈಭವಕ್ಕೆ ಜನ ಮರುಳಾಗಿ ಬಿಟ್ಟಿದ್ದರು. ಅದರಲ್ಲೂ ಮೇಲಿನ ಅಂತಸ್ತಿನಲ್ಲಿ ಕೂತಿದ್ದ ಜನ ಆಗಾಗ ಭಾರೀ ಚಪ್ಪಾಳೆ ತಟ್ಟುತ್ತಿದ್ದರು. ಹಾಗೆ ಅವರು ಪದೇ ಪದೇ ಚಪ್ಪಾಳೆ ತಟ್ಟುತ್ತಿದ್ದುದು ಶೇಣಿಯವರಿಗೆ ಕಿರಿ ಕಿರಿ ತಂತು. ಅವರು ಕೂಡಲೇ ಆ ಮೇಲಿನ ಅಂತಸ್ತಿನ ಜನರೆಡೆಗೆ ಕೈ ತೋರಿಸಿ ಅಂದಿದ್ದೇನು ಗೊತ್ತಾ?
"ಏನು? ರಾಮನ ಕಪಿ ಸೇನೆ ಬಂದೂ ಬಂದು ಬಂದು ಇಲ್ಲಿವರೆಗೂ ಬಂತಾ? ಛೆ, ಛೆ, ಛೇ....ಇನ್ನು ನಾವು ತಡ ಮಾಡುವಂತಿಲ್ಲ. "

ಮತ್ತೆ ಚಪ್ಪಾಳೆ ಬೀಳಲಿಲ್ಲ!!

6 ಕಾಮೆಂಟ್‌(ಗಳು):

ಕೆ. ರಾಘವ ಶರ್ಮ March 18, 2009 at 4:23 AM  

ಓಹ್...ಹೌದಾ...

ಅದರಲಿ ನೀವು ಇಳಿ ವಯಸ್ಕರಾದಾಗ ನಿಮ್ಮ ಲವ್ ಬಗ್ಗೆ ಯಾರು ಬರಿತಾರೆ ಅನ್ನೋ ಕುತೂಹಲ ನಂಗೆ...!

ಸುನಿಲ್ ಹೆಗ್ಡೆ March 18, 2009 at 4:29 AM  

ನಿಮ್ಮ ನೆನಪುಗಳ ಬಗ್ಗೆ ಬರೆಯೋದಿಲ್ವಾ... :)

ರಾಕೇಶ್ ಕುಮಾರ್ ಕಮ್ಮಜೆ March 18, 2009 at 4:32 AM  
This comment has been removed by the author.
Admin March 18, 2009 at 5:58 AM  

nice blog....enjoyed reading

ಮನೋರಮಾ.ಬಿ.ಎನ್ March 18, 2009 at 7:33 AM  

noopura bhramarigu heenge baradu kodlagada..heengippa kathegala kodte anta helidre ankanave suru madlakku... enta helte? bareveya?

Umesh March 19, 2009 at 4:45 AM  

Really I got an opportunity to read your article. I got immense enjoyement while reading. Keep it up.

Powered By Blogger