ಹಬ್ಬದ ಸಂಭ್ರಮದಲ್ಲಿ ಉಪವಾಸ ಬಿದ್ದವನ ಕತೆ...

>> Friday, March 27, 2009

ಇಂದು ಯುಗಾದಿ. ಸ್ನೇಹಿತರು, ಬಂಧುಗಳೆಲ್ಲ ಬೆಳಗ್ಗಿನಿಂದ ಒಂದೇ ಸಮನೆ ಶುಭಾಷಯ ಸಂದೇಶಗಳನ್ನು ಕಳುಹಿಸುತ್ತಲೇ ಇದ್ದಾರೆ. ಇನ್ನೂ ಬರುವುದು ನಿಂತಿಲ್ಲ. ನಾನೂ ಹಾಗೆಯೇ, ಸಂದೇಶಗಳನ್ನು ಅವರ ಕರವಾಣಿಗಳಿಗೆ ಕಳುಹಿಸುತ್ತಿದ್ದೇನೆ. ಈ ಹಬ್ಬಗಳ ಸಂಭ್ರಮವೇ ಹಾಗೆ; ಎಲ್ಲರೂ ಖುಷಿ ಪಡುವ ಹಾಗೆ!

ಹಾಗೆ ನೋಡಿದರೆ ನಾನೀಗ ಮನೆಯಲ್ಲಿ ಅಮ್ಮ ಬಳಿಸಿದ ಹಬ್ಬದ ಊಟವನ್ನು ಉಣ್ಣುತ್ತಿರಬೇಕಿತ್ತು. ಮೈಸೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮ ವಿಭಾಗದಲ್ಲಿ ಓದುತ್ತಿರುವ ನಾನು ಸಾಮಾನ್ಯವಾಗಿ ಹಬ್ಬಗಳ ಸಂದರ್ಭದಲ್ಲಿ ಮನೆ ಕಡೆ ಸವಾರಿ ಬೆಳೆಸುತ್ತೇನೆ. ಹಬ್ಬ ಇಲ್ಲದಿದ್ದರೂ ತಿಂಗಳಿಗೊಮ್ಮೆ ಹೋಗುವುದು ಇದ್ದದ್ದೇ. ಆದರೆ ಈ ಬಾರಿ ಯಾಕೋ ಹಬ್ಬ ಬಂದಿದ್ದರೂ, ಮನೆ ಕಡೆ ಹೋಗದೆ ತಿಂಗಳಾಗಿದ್ದರೂ ಮೈಸೂರಲ್ಲೇ ಇರೋಣ ಅನಿಸಿತ್ತು. ಯಾಕೆಂದರೆ ಈಗ ನನ್ನದು ಅಂತಿಮ ಸೆಮೆಸ್ಟರ್. ಇರುವುದಿನ್ನು ಅಬ್ಬಬ್ಬಾ ಅಂದರೆ ಎರಡು-ಎರಡೂವರೆ ತಿಂಗಳು. ಈ ಹಿನ್ನೆಲೆಯಲ್ಲಿ ಮುಂದಿನ ಉದ್ಯೋಗಕ್ಕಾಗಿ ಈಗಲೇ ತಯಾರಾಗಬೇಕು. ಆದ್ದರಿಂದ ಮನೆಗೆ ಹೋಗಿ ನಾಲ್ಕೈದು ದಿನ ಹಾಳು ಮಾಡುವುದು ಬೇಡ, ಅಲ್ಲಿ ಮಾಡುವುದನ್ನು ಇಲ್ಲೇ ಮಾಡೋಣ(!!) ಅಂತ ಸುಮ್ಮನಿದ್ದೆ.

ಅಂದ ಹಾಗೆ ಈ ಹಬ್ಬದ ಕಾರಣದಿಂದ ಊಟದ ಮೆಸ್ ಇನ್ನೆರಡು ದಿನ ಇರುವುದಿಲ್ಲ ಅಂತ ಮೆಸ್ ಆಂಟಿ ನಿನ್ನೆಯೇ ಹೇಳಿದ್ದರು. 'ಸರಿ ಆಂಟಿ' ಅಂತಂದು ಬಂದಿದ್ದೆ. ಇಂದು ಬೆಳಗ್ಗೆ ಹತ್ತಿರದ ಹೋಟೆಲಿಗೆ ಹೋಗಿ ತಿಂಡಿ ತಿಂದು, ಪೇಟೆಗೊಮ್ಮೆ ಸುಮ್ಮನೆ ಹೋಗಿ ಈಗ್ಗೆ ಸ್ವಲ್ಪ ಸಮಯಕ್ಕೆ ಮುಂಚೆ ಅಂದರೆ ಸುಮಾರು ಎರಡು ಗಂಟೆಗೆ ವಾಪಸ್ ಬಂದೆ. ತುಂಬಾ ಹಸಿವಾಗುತ್ತಿತ್ತು. ಉಂಡು ಬರೋಣ ಅಂತ ಹೋಟೆಲಿಗೆ ಹೋದರೆ ಹೋಟೆಲ್ ಮುಚ್ಚಿತ್ತು. ಪಕ್ಕದ ಅಂಗಡಿಯವರನ್ನು ಕೇಳಿದರೆ 'ಹಬ್ಬ ಆಲ್ವಾ ಸಾರ್' ಅಂದರು. ಮತ್ತೊಂದು ಹೋಟೆಲಿಗೆ ಹೋದೆ. ಆ ಹೋಟೆಲಿಗೂ ಹಬ್ಬವಂತೆ! ಇನ್ನು ಉಳಿದಿರುವುದು ಒಂದೇ ಹೋಟೆಲ್. ಅದೂ ಮುಚ್ಚಿದ್ದರೆ ಮತ್ತೆ ಸನಿಹದಲ್ಲೆಲ್ಲೂ ಹೋಟೆಲಿಲ್ಲ. ದೇವರೇ ಅಂದುಕೊಳ್ಳುತ್ತಾ ಆ ಹೋಟೆಲಿಗೆ ನಡೆದೆ. ಹಸಿವು ಬೇರೆ ಸಿಕ್ಕಾಪಟ್ಟೆ. ಹೋಗಿ ನೋಡಿದರೆ, ಸಧ್ಯ ಮುಚ್ಚಿರಲಿಲ್ಲ. ಜೀವ ಬಂದಂತಾಯಿತು. ಹೋಟೆಲಿನ ಒಳಗೆ ಹೋಗಿ ನೋಡುತ್ತೇನೆ; ಸಪ್ಲಾಯರ್ ಖುರ್ಚಿಗಳನ್ನು ಜೋಡಿಸಿಡುತ್ತಿದ್ದ!

ಹಸಿವು ತಡೆಯಲಾಗುತ್ತಿರಲಿಲ್ಲ, ದೂರದ ಬೇರೆ ಹೋಟೆಲಿಗೆ ಹೋಗುವುದು ಬದಿಗಿರಲಿ; ಹಸಿವಿನಲ್ಲಿ ಎಲ್ಲಿ ಕುಸಿದು ಬೀಳುತ್ತೇನೋ ಎಂಬಂತಾಗಿತ್ತು. ಎಷ್ಟರ ಮಟ್ಟಿಗೆ ಹಸಿವು ಕಾಡುತ್ತಿತ್ತು ಅಂದರೆ ಸಪ್ಲಾಯರ್ ನಲ್ಲಿ 'ಹಸಿವಾಗ್ತಿದೆ, ಊಟ ಕೊಡ್ತೀರಾ?' ಅಂತ ತೀರಾ ಭಿಕ್ಷುಕನಂತೆ ಕೇಳಿಕೊಂಡೆ. 'ಇಲ್ಲ ಸಾರ್ ಹಬ್ಬ ಆಲ್ವಾ? ಬೆಳಗ್ಗೆ ಓಪನ್ ಮಾಡಿದ್ವಿ ಈಗಿಲ್ಲ' ಅಂತ ಒಳ ನಡೆದ. ಮೊದಲ ಬಾರಿಗೆ ಹಬ್ಬಗಳ ಬಗೆಗೆ ತಾತ್ಸಾರ ಹುಟ್ಟಿತು!

ಬಾಳೆಹಣ್ಣು ತಿನ್ನೋಣ ಅಂದುಕೊಂಡೆ. ಊಹೂಂ, ಹಬ್ಬ ನೋಡಿ, ಅಂಗಡಿಗಳೂ ಮುಚ್ಚಿದ್ದವು! ಹಾಗೋ ಹೀಗೋ ರೂಮಿಗೆ ಬಂದು ಬಾಟಲಲ್ಲಿ ಉಳಿದಿದ್ದ ನಿನ್ನೆಯ ನೀರನ್ನು ಕುಡಿಯಲು ತಲೆಯೆತ್ತಿ ಬಾಯಿ ತೆರೆದರೆ, ಕಾಣಿಸಿದ್ದು ಕ್ಯಾಲೆಂಡರಿನಲ್ಲಿ ಕೆಂಪು ಅಕ್ಷರದಲ್ಲಿ ಬರೆದ 'ಯುಗಾದಿ'! ಹೇಗಾಗಬೇಡ ಹೇಳಿ?

ನೀರನ್ನು ಕುಡಿದಾಗ ಸ್ವಲ್ಪ ಜೀವ ಬಂದಂತಾಯಿತು. ಆದರೆ ಹಬ್ಬದ ಈ ಸಂಭ್ರಮವನ್ನು ನಿಮ್ಮೊಂದಿಗೆ ಈಗಲೇ, ಹಸಿದ ಹೊಟ್ಟೆಯ ಹಪಹಪಿಯಲ್ಲೇ ಹಂಚಿಕೊಳ್ಳಬೇಕೆನಿಸಿತು. ಹಾಗಾಗಿ ಪಕ್ಕದ ರೂಮಿನವನ ಇಂಟರ್ ನೆಟ್ಟಿನಲ್ಲಿ ಬರೆಯಲು ಕೂತಿದ್ದೇನೆ.

ಪ್ರಾಯಶಃ ರಾತ್ರಿ ಕೂಡಾ ಊಟ ಸಿಗಲಿಕ್ಕಿಲ್ಲ, ಯಾಕೆಂದ್ರೆ ಹಬ್ಬ ಆಲ್ವಾ?!

8 ಕಾಮೆಂಟ್‌(ಗಳು):

ಕೆ. ರಾಘವ ಶರ್ಮ March 27, 2009 at 3:20 AM  

ಹಬ್ಬದ 'ಮಹತ್ವ'ವನ್ನು ನೀವು ಈಗ ಚೆನ್ನಾಗಿ ಅರಿತುಕೊಂಡಂತಾಯಿತು...

Ittigecement March 27, 2009 at 6:58 AM  

ರಾಕೇಶ್...

ಬೇವು ಬೆಲ್ಲದ ಹಬ್ಬದಲಿ...

ನಿಮ್ಮ ಜತೆಗೊಬ್ಬ ಸಂಗಾತಿ..
ಬಾಳಗೆಳತಿಯ ಹಾರೈಸಲೆ..?..

ಬರುವ ಯುಗಾದಿಯ ಒಳಗೆ....

ಉಗಾದಿಯ ಶುಭಾಶಯಗಳು...
ನಿಮ್ಮೆಲ್ಲ ಆಸೆ, ಕನಸುಗಳು ಈಡೇರಲಿ...

NATESH March 27, 2009 at 7:26 AM  

ಚೆನ್ನಾಗಿದೆರೀ..ನಿಮ್ಮ ಹೊಸ ವರುಷದ ಮೊದಲ ಅನುಭವಾ....

ರಾಕೇಶ್ ಕುಮಾರ್ ಕಮ್ಮಜೆ March 27, 2009 at 11:54 PM  

ರಾಘವ, ಪ್ರಕಾಶ್ ಹೆಗ್ಡೆ ಹಾಗೂ ನಟೇಶ್ ವಿಟ್ಲ... ನಿಮಗೆಲ್ಲಾ ಧನ್ಯವಾದಗಳು.

ಕಾರ್ತಿಕ್ ಪರಾಡ್ಕರ್ March 28, 2009 at 6:49 AM  

ನಿಮಗಂತೂ 'ಮಾರಿ ಹಬ್ಬ' ಆಯ್ತಲ್ಲಾ!!!

ಒಪ್ಪಣ್ಣ, April 1, 2009 at 2:05 AM  

ತುಂಬಾ ಚೆನ್ನಾಗಿದೆ ಹಬ್ಬದೂಟ . . . :-)
Good one!

ekanasu April 24, 2009 at 6:22 AM  

ಯುಗಾದಿಗೆ nice experience

shivu.k May 25, 2009 at 9:58 PM  

ರಾಕೇಶ್ ಸರ್,

ಹಬ್ಬದ ಮಹತ್ವವನ್ನು ಚೆನ್ನಾಗಿ ಬರೆದಿದ್ದೀರಿ...

ಧನ್ಯವಾದಗಳು...

ಬಿಡುವಾದಾಗ ನನ್ನ ಬ್ಲಾಗಿಗೂ ಬೇಟಿ ಕೊಡಿ ಸರ್..

Powered By Blogger