ಕಾಡುವ ಕನವರಿಕೆ

>> Thursday, March 26, 2009

ಜ್ಞಾಪಕ ಶಾಲೆಯ ತುಂಬಾ ತುಂಬಾ
ಚೆಲುವಿನ ಚಿತ್ರಗಳು
ನಿನ್ನಯ ಕನಸೇ ನನ್ನಯ ಬದುಕಿನ
ಹಗಲೂ ರಾತ್ರಿಗಳು

ಒಲವಿನ ಗೆಳತಿಯೆ ಕಾಡುವೆ ಮತ್ತೆ
ಮತ್ತೆ ಮತ್ತೆನಗೆ
ಪಶ್ಚಿಮದೂರಿಗೆ ರವಿ ಜಾರುವ ಹಾಗೆ
ನಾನೂ ನಿನ್ನೆಡೆಗೆ

ಆದರೆ ಎಂತು ಹೇಳುವುದಿಂತು
ಅರಿಯೆನು ಹೊಸದಾರಿ
ಮನಸಿನ ಮಂಟಪದೊಳಗಡೆ ಮಾತ್ರ
ನನ್ನದೆ ಜಯಭೇರಿ!

ಎದೆಗೂಡಲ್ಲಿ ಬಚ್ಚಿಟ್ಟಿರುವ
ಪ್ರೇಮವು ತಿಳಿದೀತೇ?
ಅರಳಲು ಬಾರದ ಮಲ್ಲಿಗೆ ಹೂವು
ಪರಿಮಳ ಬೀರೀತೇ?

ಸ್ನೇಹದ ಬಂಧ ಕಿತ್ತರೆ ಮತ್ತೆ
ಪ್ರೀತಿಯ ಭರದಲ್ಲಿ
ಜೀವಿಸಬಲ್ಲೆನೆ ಎರಡನೂ ಕಳೆದು
ಈ ಬರಿ ಧರೆಯಲ್ಲಿ

ಬದುಕೇ ಹೀಗೆ ಉತ್ತರವಿಲ್ಲದೆ
ಉಳಿಯುವ ಪ್ರಶ್ನೆಗಳು
ಕನವರಿಕೆಯಲೇ ಕಳೆದು ಹೋಗುವ
ಇಂದೂ - ನಾಳೆಗಳು!

1 ಕಾಮೆಂಟ್‌(ಗಳು):

ಸುಶಾಂತ್ ಬನಾರಿ November 8, 2009 at 4:46 AM  

kaaduttiddaroo chennagide
kanavarikeyalloo lava vavikeyide
laya sogasaagide